14/03/2023

ಪ್ರಪಂಚದ ಸುತ್ತ, ಅನುಭವದ ಸುತ್ತ

 ಪ್ರಪಂಚದ ಸುತ್ತ, ಅನುಭವದ ಸುತ್ತ

 (ದುಬೈನಲ್ಲಿ ಶಿವರಾತ್ರಿಯ ಅನುಭವ )

********************************

  ನನ್ನ ಹೆಸರು ಸರೋಜಾ ರಾವ್.ಬೆಂಗಳೂರಿನಲ್ಲಿ ಕಾವೇರಿ ರೋಡಿನಲ್ಲಿ ನಮ್ಮ ಮನೆ ಇದೆ. ಹೆಸರು "ರಾಮ ರಕ್ಷ "

 ನಮ್ಮ ಮನೆಯ ಬಳಿಯಲ್ಲೇ ಮಂಜು

 ನಾಥೇಶ್ವರ ದೇವಸ್ಥಾನ, ಆಂಜನೇ ಯ 

 ದೇವಸ್ಥಾನಗಳು ಇವೆಯಾವ ಹಬ್ಬಗಳು ಬಂದರೂ, ಆಯಾ ದೇವರುಗಳನ್ನು ಇಲ್ಲಿಯ ದೇವಸ್ಥಾನಗಳಲ್ಲಿಯೇ ನೋಡ ಬಹುದು.  ಈಗ ಶಿವರಾತ್ರಿ ಹಬ್ಬ ಬಂದಿದೆ. ದುಬೈನಲ್ಲಿದ್ದೇನೆ. ಏನು ಮಾಡುವುದು

 ಶಿವನನ್ನು ಎಲ್ಲಿ ದರ್ಶನ ಮಾಡುವುದು ಎಂದುಕೊಳ್ಳುತ್ತಿದ್ದೆ. ಹಬ್ಬದ ಬೆಳಗಿನ

 ಜಾವ ನಾಲಕ್ಕು ಗಂಟೆಗೆ ಸೊಸೆ, ರವಿ

 ಮತ್ತು ಅಗ್ನಿಯನ್ನು ಎಬ್ಬಿಸುತ್ತಿದ್ದಳು.

 ದುಬೈನ ವೇದ ಬಳಗ ಸತ್ಸಂಗ ದವರು ಮಹಾ ರುದ್ರ ಮಹಾ ಯಜ್ಞಂ ಎಂಬ

 ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. 11 ಜನ ಋತ್ವಿಕರು, 11 ಗುಂಪುಗಳಲ್ಲೀ ಏಕಕಂಠದಲ್ಲಿ 11 ಬಾರಿ ಪಠಿಸಿದರು

 ರುದ್ರ ಮತ್ತು ಚಮೆಯನ್ನು. ನೋಡಲು

 ಕೇಳಲು ಕರ್ಣಾನಂದ ಕರವಾಗಿತ್ತು.

ಈ ಅಭೂತ ಪೂರ್ವ ದೃಶ್ಯ ನೋಡಲು

 ಪೂರ್ವ ಜನ್ಮದ ಸುಕೃತಿ ಇದ್ದರೆ ಮಾತ್ರ ಸಾಧ್ಯ ಎಂದೆನ್ನಿಸಿತು. ಮನಸ್ಸು ಆನಂದ ಪರವಶವಾಗಿತ್ತು.

ನಾನು ನನ್ನ ಇಬ್ಬರು ಮಕ್ಕಳು ರಾಮು ರವಿ, ಮೊಮ್ಮಕ್ಕಳಾದ ಭಾರ್ಗವ

 ಅಗ್ನಿ, ಅಭಿಜ್ಞಾ ಮತ್ತು ಧ್ವನಿ  ಮತ್ತು ಸೊಸೆಯರಾದ ಶಾರದ ಅಕ್ಷತಾ ಎಲ್ಲರೂ ವೇದ ಗುರುಗಳಾದ ಶ್ರೀಯುತ ಮುರುಳಿ ಶರ್ಮರ ಶಿಷ್ಯರು ಎಂದು

 ಹೇಳಿಕೊಳ್ಳಲು ಅತ್ಯಂತ ಹೆಮ್ಮೆಯಾಗುತ್ತಿದೆ. ಅವರ ನಿಸ್ವಾರ್ಥ  ಪರಿಶ್ರಮದಫಲವಾಗಿ ಅವರ ನೇತೃತ್ವದಲ್ಲಿ ಸಹಸ್ರ

ಸಹಸ್ರ ಶಿಷ್ಯರುಗಳು ತಯಾರಾಗುತ್ತಿದ್ದಾರೆ. ಮೂರ್ತಿ ಚಿಕ್ಕದಾದರೂ  ಕೀರ್ತಿದೊಡ್ಡದು ಎಂಬಂತೆ ಪುಟ್ಟ ಪುಟ್ಟ ಮಕ್ಕಳು ವೇದದ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಹೇಳಲು ಅತ್ಯಂತ ಸಂತೋಷವಾಗತ್ತದೆ ಇಲ್ಲಿದುಬೈನಲ್ಲಿ ನಡೆದ ಸಮಾರಂಭದಲ್ಲಿ

ಅತ್ಯಂತ ಕಿರಿಯ ಬಾಲಕ, ಶ್ರೀಯುತ ಮುರಳಿಯವರ ಪ್ರಿಯಶಿಷ್ಯ ಚಿರಂಜೀವಿ ಅಗ್ನಿ ಹಿರಿಸಾವೇ  ಎಲ್ಲರಮುದ್ದಿನ ಕೇಂದ್ರ ಬಿಂದು ಆಗಿದ್ದ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತದೆಭಕ್ತಿಯಿಂದ ಕರೆದರೆ ಶಿವಓ ಗೊಡನೆ ಎಂಬಂತೆ ನಮಗೆ ಇಲ್ಲಿಯೇ

 ಶಿವ ದರ್ಶನ ಅದ್ಭುತವಾಗಿ ಆಯ್ತುಅ

ಭಿಷೇಕ,ಪೂಜೆ ಜನಗಳ ಭಕ್ತಿ ಭಾವ ನೋಡುತ್ತಿದ್ದರೆ ಕೈಲಾಸವೇ ಧರೆಗಿಳಿದು ಬಂದಿತ್ತೇನೋ ಎಂಬ ಭಾವ. ಆ ಪೂಜೆ

 ಅಲಂಕಾರ, ಅನ್ನಸಂತರ್ಪಣೆ  ಜನರ ಸೌಹಾರ್ದ ಎಲ್ಲವೂ ಮರೆಯಲಾರದ ನೆನಪುಗಳು. ಪುನೀತರಾದ ಭಾವನೆ.

 ಈ ಲೇಖನದೊಡನೆ ಕೆಲವು ಭಾವ

 ಚಿತ್ರಗಳನ್ನು ಎಲ್ಲರೊಡನೆ ಹಂಚಿಕೊಳ್ಳಲು ಬಯಸಿದ್ದೇನೆ.


 ರಚನೆ

 ಸರೋಜಾ ರಾವ್ 

antharangada alegal

ಒಂದು ದಿನ ಕನಸಿನಾ ಲೋಕದಲಿ
 ತೇಲುತಿರೆ ನಾನು
 ಶುಭ್ರ ಆಗಸದಲ್ಲಿ ಬೆಳ್ಳಿ ಚುಕ್ಕೆಗಳ
 ನಡುವಿನಲಿ
 ಹೊಂಬಣ್ಣದಾ ರಥವು ತೇಲಿ ಬಂದಂತಾಯ್ತು
 ಹಾಲು ಬಿಳಿ ಕುದುರೆಗಳು ಕಂಡಂತೆ ಆಯ್ತು!

 ಏನಿದೀ ಆಶ್ಚರ್ಯ! ಬೆರಗು ಗಣ್ಣು
ಗಳಿಂದ ನೋಡುತ್ತಲ್ಲಿದ್ದೆ
 ಬಿಟ್ಟ ಬಾಯಿಯ ತೆರೆದ ಕಣ್ಗಳ
 ಮುಚ್ಚಲಿಲ್ಲಾ ನಾನು 
 ರಥವನ್ನು ಏರಿದ್ದ ಕನ್ಯೆ ಯಾರಿವಳು?
 ನೋಡಿದ್ದ ನೆನಪು ಮರುಕಳಿಸಿತು!

 ಆ ಬೆಡಗು ಸೌಂದರ್ಯ ಮರೆಯಲಾ
ರೇ ನಾನು
 ಸುಂದರದ ಬಿಲ್ಲಿನ ಬಾಗಿದ ಹುಬ್ಬು
 ಮಾಟವಾದ ಮೂಗು
 ಅದೇ ಅದೇ ವಿಶಾಲ ಕಪ್ಪು ದುಂಬಿಯಂತಹ ನೇತ್ರಗಳು
 ಮರೆಯಬಹುದೇ, ಮರೆಯಲಹುದೇ
 ಆ ಸುರ ಸುಂದರಿಯನ್ನು!

 ಶುಭ್ರ ಬಿಳಿ ಶಂಖದ ಬಣ್ಣ, ಗುಲಾಬಿಯ
 ಕೆನ್ನೆಗಳು
 ಚಂದ್ರನನೆ ನಾಚಿಸುವ ಮುಗ್ಧ ಸೌಂದರ್ಯ
 ಬ್ರಹ್ಮದೇವನು ತೀಡಿ  ತಿ ದ್ದಿ ಸೃಷ್ಟಿಸಿದ
 ಅನುಪಮದ ಚೆಲುವು
 ಏಕೆ ಮರೆತನೋ ಕಾಣೆ ಚಾಲನೆಯ
 ಕೊಡಲು!

 ಆ ಕನ್ಯೆ ಉಲಿದಳು ಮಧುರ ವೀಣೆಯಂತೆ
 ಅಚ್ಚರಿಯಲ್ಲಿ ಬೆರಗಾಗಿ  ಕೇಳುತ್ತಲೇ
 ಇದ್ದೆ ನಾನು
 ಇದು ಸ್ವಪ್ನವೋ ನಿಜವೋ ತಿಳಿಯ
 ಲಾರದೇ ನಾನು
 ಆಲಿಸುತ್ತ ಕುಳಿತೇ ಅವಳ ನುಡಿಗಳನ್ನು

 ದೇವಲೋಕದ ಅಪ್ಸರೆಯಾಗಿದ್ದೆ ನಾನು
 ಶಾಪ ವಿಮೋಚನೆಗಾಗಿ ಬಂದಿದ್ದೆ ನಾನು
 ನಿಜ ಪ್ರೀತಿಯ ಸುಖ ಸವಿಯ ಬಂದಿದ್ದೆ
 ಮಾತೃ ಪ್ರೇಮದ ಮೌಲ್ಯವ ತಿಳಿಯ ಬಯಸಿದ್ದೆ

 ದೇವಲೋಕದಿ ಹಾಡಿ ಹಾಡಿ ಆಯಾಸವಾಗಿತ್ತು
 ನೃತ್ಯ ಮಾಡಿ ಮಾಡಿ ಕಾಲು ನೊಂದಿತ್ತು
 ಅಂತೆಯೇ ನನ್ನ ಮನ ವಿಶ್ರಾಂತಿ ಬಯಸಿತ್ತು
 ಅಂತೆಯೇ ಬಂದೆ ನಾ ಈ ಲೋಕಕೇ!!

 ನನಗೀಗ ತೃಪ್ತಿ ಬಲು ಸಂತೋಷವಾಗಿ
 ಹರಸುತ್ತಿದೆ ಮನ ಎಲ್ಲರಾ ತೃಪ್ತಿಗಾಗಿ 
 ಬೇಕಿದ್ದ ಆರಾಮ ಸಿಕ್ಕಿತೂ ಎನಗಾಗಿ
 ತಿಳಿಸುವಿರಾ ಈ ವಿಷಯ ನನ್ನವರಿಗೆ

 ಸದಾ ಸಂತ್ರಪ್ತಿ ದೇವತೆಗಳಿಗೆ ಇರಲೇಬೇಕು
 ಅತೃಪ್ತಿ ಕ್ಷಣಮಾತ್ರವೂ ನಮಗೆ ಇರಬಾರದು
 ಆಸೆಗಳು ಬಯಕೆಗಳು ಮೂಡಿ ಬಂದರೆ ನಮಗೆ
 ತಾಣವೇ ಸಿಗದೆಮಗೆ ಸ್ವರ್ಗ ಲೋಕದಲ್ಲಿ

 ಕ್ಷಣ ಮಾತ್ರ ತಾಯಿ ತಂದೆಯೊಲವ ಬಯಸಿದ್ದೆ
 ಕಾಮನಬಿಲ್ಲಿನ ಜಾರುಗುಪ್ಪೆಯಾ ಜಾರಿ ಬಂದೆ
 ಪ್ರೀತಿ ಅಮೃತವನ್ನು ಮೊಗೆ ಮೊಗೆದು ಸವಿದೇ
 ಧನ್ಯಳಾದೆನು ನಾನು ಪ್ರೀತಿ ಸಂಕೋಲೆಯಲ್ಲಿ

 ದೇವಲೋಕದ ಕರೆಯು ಆಗಾಗ ಬರುತ್ತಿತ್ತು 
 ನಿನ್ನ ಸಂಗೀತ ಕೇಳದೆ ನರ್ತನವ ಕಾಣದೆ
 ದೇವಲೋಕವೇ ನಿನ್ನ ಕಾಣಲು ತಪಿಸಿದೆ
 ಬಂದು ಬಿಡು ಎಂದು ದೇವನಾಜ್ಞೆ ಬಂತು

 ಅಂತೆಯೇ ಮರಳಿದೆ ಮತ್ತೆ ನಾ ಸ್ವರ್ಗಕ್ಕೆ
 ಸುಪ್ತ ನಿದ್ರೆಯೊಳು ಗೋಚರವಿತ್ತು ಮನಕೆ
 ಮಾತೃ ಸವಿ ಪಾಯಸ ವೆಂಬ ಅಮೃತದ  ರುಚಿಯುಂಡೇ ನಾನು
 ಅದರ ಮಧುರತೆಯನೆಂದೂ ಮರೆಯೆ ನಾನು

 ದುಷ್ಟರ ಶಿಕ್ಷಿಸಲು ಶಿಷ್ಟರನು ರಕ್ಷಿಸಲು 
 ಶಕ್ತಿವಾಹಿನಿಯು ಹರಿಯುತಿದೆ ಕೈಗಳಲ್ಲಿ
 ನಿಮ್ಮಂಥ ಸುಜನರ ಅನವರತ ರಕ್ಷಿಸುವೆ
 ಎಂದಳು ನನ್ನೆಡೆಗೆ ಒಲವಿಂದ ನೋಡುತ್ತಾ

ಇಂತು ನುಡಿದಳು ಅವಳು ಮಂದಹಾಸವ ಬೀರಿ
 ಗಾನ ದೇವತೆಯೇ ನುಡಿದಂತೆ ಅನ್ನಿಸಿತು
 ನಾನಿನ್ನು ಬರಲೇ ಎನ್ನುತ್ತಾ ಕುಳಿತಳು ರಥ ದಿ
 ವಾಯುವೇ ಗದಿ ಕುದುರೆ ಓಡಲಾರಂಬಿಸಿತು

 ಕಣ್ತುಂಬಿ ನೋಡಿದೆನು ಆ ದಿಕ್ಕಿನಲ್ಲೇ
ದಟ್ಟ, ಸುಂದರ ನೀಳ ಕರಿಯ ಕೂದಲು
 ಗಾಳಿಯಲ್ಲಿ ಹಾರಿ ಮರೆಯಾಯಿತೂ ಅಲ್ಲೇ
 ಮೋಡದೊಳಗೆ ಜಾರಿ ನೀರವತೆಯ ಬೀರಿ

ಆ ಸುಂದರ ದೃಶ್ಯಗಳ ಮರೆಯಲಾರೆನು ನಾನು
 ಸೃಷ್ಟಿ ಬ್ರಹ್ಮನ ನಾನು ಶಪಿಸುತ್ತಲೆ ಇಹೆನು
 ರಾಜ ರವಿವರ್ಮನಂತೆ ಚಿತ್ರಕಾರನ ಮಾಡಿದ್ದರೆ ನನ್ನ
 ಈ ಸುಂದರ ದೃಶ್ಯಗಳ ಚಿತ್ರಿಸಬಹುದಿತ್ತಲ್ಲವೇ

 ಸುಂದರದ ಪಾದಗಳು ಮದರಂಗಿ ಚಿತ್ತಾರ
 ಶ್ವೇತವರ್ಣದ ಕುದುರೆ ಹೊನ್ನಿನಾ ರಥವು
 ಬೀಸುತ್ತಿಹ ಕೈಗಳ ಹಾ ರುತಿ ಹ ಕೂದಲಿನ
 ಚಂದ್ರಮುಖಿ ಮೋಡಗಳ ಮಧ್ಯದಲ್ಲಿ ಮರೆಯಾದಳೂ!!

 ರಚನೆ
 ಸರೋಜಾ ರಾವ್ 

17/11/2017

ಧ್ವನಿ

ನಮ್ಮ ಮನೆಯ ಪುಟ್ಟ ಮಗು ನೋಡಲತಿ ಸುಂದರ
ಅದನು ನೋಡಿ ನಾಚುತಿಹನು ಬಾನಿನ ಪೂರ್ಣ ಚಂದಿರ
ಧ್ವನಿಯ ನೆನಪು ಆದೊಡನೆ ನನ್ನ ಹೃದಯ ಮಂದಿರ
ಆಗುವುದು ನನ್ನ ಮನ ಹಸಿರು ಪ್ರೇಮದ ಹಂದರ

ಧ್ವನಿಯ ಆಟಪಾಟ ನೋಡಿ ಹಿಗ್ಗುತಿಹುದು ಎನ್ನ ಮನ
ಬಾಳೆಂದೂ ತೇಲುತ್ತಿರಲಿ ಸೌಖ್ಯದಲಿ ತನುಮನ
ಅವಳ ನೆನಪು ಆದೊಡನೆ ಮುಖದಿ ಮಂದ ಹಾಸ 
ಆಗುವುದು ನನ್ನ ಮನ ನೂರು ನೆನಪುಗಳ ದಾಸ

ಹಲ್ಲಿಲ್ಲದ ಬೊಚ್ಚು ಬಾಯ ನಗುವದೆಷ್ಟು ಸುಂದರ
ಅದು ಕಂಡು ಹೊಡೆಯುವುದು ನನ್ನ ಹೃದಯ ಡಂಗುರ
ನೆನಪುಗಳು ಮಾಲೆ ಮಾಲೆ ಯಾಗಿಸುಳಿದು ಸುಳಿದು
ಹೋಗುತಿಹುದು ದೂರ ದೂರ ದುಃಖವನ್ನು ಕಳೆದು 

ಧ್ವನಿಯೊಡನೆ ಆಡಿಪಾಡಿ ಮತ್ತೆ ಬಾಲ್ಯ ಮರುಕಳಿಸಿದೆ
ಚಿರಕಾಲ ಹಸಿರಾಗಿ ನೆನಪಿನಲ್ಲಿ ಉಳಿಯುತ್ತಿದೆ 
ನನ್ನ ಗೆಳತಿ ಪುಟ್ಟ ಗೆಳತಿ ಸದಾ ಸದಾ ನಗುತಿರಲಿ
ನನ್ನ ಮನದ ಅಂಗಳದಲ್ಲಿ ಸದಾ ಬಂದು ಆಡುತಿರಲಿ



27/04/2014

ವರದ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ

ವರದ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ

ನಮ್ಮ ಪ್ರಕಾಶು ಮದುವೆಯ ವಾರ್ಷಿಕೋತ್ಸವಕ್ಕೆ ಬರುವಿರಾ

ಎಂದಾಗ ಸಂತೋಷದಿಂದ ಒಪ್ಪಿಕೊಂಡೆವು .ಯಾವ ಪಾರ್ಟಿ ಹಾಲ್ಗೆ ಬರಬೇಕು ಎಂದು ಕೇಳಿದೆ ಆದರೆ ಸಮಾರಂಭವು ಶ್ರೀ ವರದ ಆಂಜನೇಯನ ಸನ್ನಿಧಿ ಯಲ್ಲಿ ,ಅಪಾರ ಭಕ್ತರ ಸಮೂಹದಲ್ಲಿ ನಡೆಯಲಿದೆ ಎಂಬುದು ನನ್ನ ಊಹೆಗೆ ನಿಲುಕದ ವಿಚಾರವಾಗಿತ್ತು

                ಸಂಜೆ ಸುಮಾರು ಏಳು ಗಂಟೆಗೆ ಅಲ್ಲಿಗೆ ಹೋದೆವು ಅಲ್ಲಿಯ ವಾತಾವರಣವು ನಮ್ಮನ್ನೊಂದು ಕಲ್ಪನಾಲೋಕಕ್ಕೆ ಸೆಳೆದೊಯ್ದಿತು ಒಣ ಯಾಂತ್ರಿಕತೆಯ ಪ್ರಪಂಚದಿಂದ ಭೂವೈಕುಂಠಕ್ಕೆ ಬಂದಂತಾಯಿತು ಶ್ರೀ ವರದಾಂಜನೆಯ ಸ್ವಾಮಿಯ ಉತ್ಸವ ಮೂರ್ತಿಯು ಅಲಂಕೃತವಾಗಿ ಅಂದನವನೇರಿ ಕುಳಿತಿತ್ತು ಸಶಕ್ತರಾದ ತರುಣರು ಪಲ್ಲಕ್ಕಿಗೆ ಹೆಗಲುಕೊಡಲು ಶುಚಿಯಾಗಿ ಕಾಯುತ್ತಿದ್ದರು ಗೋವಿಂದ ನಾಮಸ್ಮರಣೆಯೊಂದಿಗೆ ಉತ್ಸವ ಹೊರಟಿತು ಹೆಜ್ಜೆ ಹೆಜ್ಜೆಗೂ ಜಯ ಘೋಷ ಗಗನವನ್ನೇ ಮುಟ್ಟುತಿತ್ತು ಪುರಂದರದಾಸರ ದೇವರನಾಮಗಳನ್ನು ಭಕ್ತರನೇಕರು ಸಾಮೂಹಿಕವಾಗಿ ಹಾಡುತ್ತಿದ್ದುದು ಹೃದಯಸ್ಪರ್ಶಿಯಾಗಿತ್ತು ತಾಳ ಡೋಲಿನ ಬದಿತದನಾದಕ್ಕೆಹೃದಯ ಹುಚ್ಚೆದ್ದು ಕುಣಿಯಿತು ಆ ಸುಂದರ ಸನ್ನಿವೇಶವನ್ನು ನಾನು ಜೀವನದಲ್ಲೇ ಮರೆಯಲಾರೆ ಒಮ್ಮೊಮ್ಮೆ ಯಾರನ್ನಾದರೂ ಬ್ಯೆಬೇಕಾದ್ರೆ ಕಪಿಮುಸುಡಿ ಎನ್ನುತ್ತೇವೆ ಆದರೆ ಆ ಕಪಿಮುಸುಡಿಯೂ ಇಷ್ಟೊಂದು ಸುಂದರವಾಗಿರಬಹುದೆಂದು ಇವತ್ತೇ ನನಗೆ ಹೊಳೆದಿದ್ದು                                    
               ಪುಟ್ಟೇನಹಳ್ಳಿಯ ಆರ್ ಬಿ ಐ ಕಾಲೋನಿಯಲ್ಲಿರುವ ಈ ಸುಂದರ ದೇವಾಲಯ ತುಂಬಾ ಅಚ್ಚುಗಟ್ಟಾಗಿ ಸುಸಜ್ಜಿತವಾಗಿ ರಾಜಕೀಯದಿಂದ ದೂರವಾಗಿ ಸುಂದರವಾಗಿ ಕಂಗೊಳಿಸುತ್ತ ಭಕ್ತರನ್ನು ಆಕರ್ಷಿಸುತ್ತಿದೆ ದೇವಾಲಯದ ಅಭಿವೃದ್ದಿಗಾಗಿ ಅಲ್ಲಿನ ಅಧಿಕಾರಿಗಳ ತಂಡ ನಿಸ್ಪ್ರುಹತೆಯಿಂದ ದುಡಿಯುತ್ತಿದ್ದಾರೆ ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬಂತೆ ಅಲ್ಲಿಹೊಗಿಯೇ ಆ ಭಕ್ತಿ ರಸವನ್ನು ಸವಿಯಬೇಕು ನಮಗೆ ಈ ಅವಕಾಶ ಕಲ್ಪಿಸಿದ ಪ್ರಕಾಶ್ ಕವಿತಾಗೆ ದೇವರು ಆಯುರಾರೋಗ್ಯ ಐಶ್ವರ್ಯಾದಿ ಗಳನ್ನು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ

12/01/2014

                                    ನೆನಪಿನ  ಸುರುಳಿ

                       ನಮ್ಮ ಬಾಲ್ಯದ ದಿನಗಳಲ್ಲಿ ಮಕ್ಕಳು ಚಿನ್ನಿಕೋಲು , ಗಾಜಿನ ಗೋಲಿಗಳೊಂದಿಗೆ ಆಡುವುದು ಸಾಮಾನ್ಯವಾಗಿತ್ತು . ತಮ್ಮನಂತೂ ಗೋಲಿ ಆಡುವುದರಲ್ಲೇ ಕಾಲಕಳೆಯುತ್ತಿದ್ದ . ಒಮ್ಮೊಮ್ಮೆ ತಂದೆಯವರು ಅಂಗಡಿಯಿಂದ ವ್ಯಾಪಾರ ಮುಗಿಸಿ ಮನೆಗೆ ಹಿಂತಿರುಗುವಾಗ ನಾಲ್ಕೈದು ಗೋಲಿ ಗಳನ್ನು ಹಿಡಿದು ತಂದು ಮಗನನ್ನು ಕರೆದು ಪ್ರೀತಿಯಿಂದ ಕೊಡುತ್ತಿದ್ದರು . ತಂದೆಯವರು ಸೋಡಾ ವ್ಯಾಪಾರವನ್ನೂ ಮಾಡುತ್ತಿದ್ದರು ತುಂಬಾ ಶ್ರೀಮಂತರಲ್ಲದ್ದರಿಂದ ತುಂಬಾ ಲೆಕ್ಕಾಚಾರವಾಗಿ ಖರ್ಚು ಮಾಡುತ್ತಿದ್ದರು
                                ಮಕ್ಕಳಾಗಿದ್ದ ನಮಗೆ ಸೋಡಾ ಕುಡಿಯುವುದೆಂದರೆ ಕಷ್ಟಸಾದ್ಯ ಕೆಲಸವಾಗಿತ್ತು ಏಕೆಂದರೆ ಅದರ ಘಾಟು ರುಚಿ . ಆದರೂ ಬಾಟಲೊಳಗಿನ ಸುಂದರ ಗೊಲಿಗಳೇ ನಮ್ಮ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು . ಆದರೆ ಗೋಲಿಗಳನ್ನು ತೆಗೆಯಲಾಗುತ್ತಿರಲಿಲ್ಲ ಫಾಕ್ಟರಿಯಲ್ಲಿ ವಿಶೇಷ ಯಂತ್ರದಿಂದ ಇಂಗಾಲದ ಡೈ ಆಕ್ಸೈಡ್ ನೊಂದಿಗೆ ನೀರು ಸೇರಿಸಿ ಗಾಜಿನ ಗೋಲಿಯ ಸಹಾಯದಿಂದ ಸೀಲ್ ಮಾಡಿದ ಬಾಟಲುಗಳು ಬರುತಿತ್ತು . ಕೆಲಸದಲ್ಲಿ ನುರಿತ ಪರಿಚಾರಕರೆ ಷರಬತ್ತಿನೊಂದಿಗೆ ಗಿರಾಕಿಗಳಿಗೆ ಸರಬರಾಜು ಮಾಡಬೇಕಿತ್ತು
                                  ಕೆಲವೊಮ್ಮೆ ಎಷ್ಟೇ ಎಚ್ಚರಿಕೆವಹಿಸಿದರೂ ಬಿಸಿಲಿನ ದಗೆ ಯಿಂದಲೋ , ಒಳಗಿದ್ದ ಅನಿಲದ ಹೆಚ್ಚಿನ ಒತ್ತಡದಿಂದ ಬಾಟಲುಗಳು ಸಿಡಿಯುತ್ತಿದ್ದವು ಬಾಟಲಿನ ಚೂರುಗಳು ಕೆಲಸಗಾರರ ರಕ್ತನಾಳಗಳನ್ನು ಕತ್ತರಿಸಿ ತುರ್ತು ಚಿಕಿತ್ಸೆಯನ್ನು ಕೊಡಿಸಬೇಕಾಗುತ್ತಿತ್ತು ಅಂಥಾ ಸಮಯದಲ್ಲಿಅಪ್ಪನಿಗೆ ಸ್ವಲ್ಪ ನಷ್ಟವೇ ಆಗುತ್ತಿತ್ತು ಕೋಪವೂ ಇರುತ್ತಿತ್ತು ಒಮ್ಮೆ ಏನಾಯಿತೆಂದರೆ ಅಪ್ಪಾ ತುಂಬಾ ಖುಷಿ ಯಲ್ಲಿದ್ದರು .ಕಾರಣ ಅಂದು ವ್ಯಾಪಾರ ಚೆನ್ನಾಗಿತ್ತು
                                 ಅಪ್ಪಾ ಒಳ್ಳೆಯ ಮೂಡಿನಲ್ಲಿ ಇದ್ದುದನ್ನು ಕಂಡು ತಮ್ಮನಿಗೆ ಕುತೂಹಲವಾಯಿತು . ಹೋಗಿ ನೋಡಿದ . ನೂರಾರು ಸೋಡಾ ಬಾಟಲುಗಳು . ಗಾಜಿನಗೋಲಿಯ ಕಂಠದ ಆಭರಣದೊಂದಿಗೆ ಸಾಲಾಗಿ ನಿಂತಿದೆ ಇವನಿಗೂ ಹಿಗ್ಗು ತಡೆಯಲಾಗಲಿಲ್ಲ ಅಪ್ಪನ ಕೈ ಹಿಡಿದು ಎಳೆಯುತ್ತಾ ಕೇಳಿದ ಇಷ್ಟೂ ಸೋಡಾ ಬಾಟಲುಗಳು ಈಗಲೇ ಒಡೆದು ಹೋದರೆ ಎಲ್ಲಾ ಗೋಲಿಗಳು ನನಗೇ ತಾನೇ?

08/01/2014

aaseya marichike

                                              ಆಸೆಯ ಮರೀಚಿಕೆ


                           ಒಂದು ಸಂಜೆ ನೆನಪಿನ ಆಳಕ್ಕೆ ಇಳಿದಿದ್ದೆ .  ಮನಸ್ಸು ಅರವತ್ತು ವರುಷಗಳ ಹಿಂದಕ್ಕೆ ವಾಯು ವೇಗದಿಂದ ಓಡಿತು . ಅಪ್ಪನ ನೆನಪು ಕಾಡಿತು . ಅಂದಿನ ದಿನಗಳಲ್ಲಿ ಅಪ್ಪ ಶಿಸ್ತಿನ ಸಿಪಾಯಿ . ಅವರ ಮಾತಿನ ವಿರುದ್ದ ಯಾರೂ ಚಕಾರ ವೆತ್ತುವಂತಿಲ್ಲ  . ಎಲ್ಲರೂ ಬೆಳಗಿನ ಜಾವ ನಾಲ್ಕೂವರೆಗೆ ಎದ್ದು ಹಲ್ಲುಜ್ಜಿ ಮುಖ ತೊಳೆದು ಓದಿಕೊಳ್ಳಬೇಕು . ಅಪ್ಪ (ನಮ್ಮೆಲ್ಲರ ಪ್ರೀತಿಯ ಗುಂಡಣ್ಣ )ವಾಯುವಿಹಾರಕ್ಕೆ ಹೊರಡುತ್ತಿದ್ದರು .ನಾವೆಲ್ಲ ಆಗ ಚಿಕ್ಕಮಕ್ಕಳು ಬಾಲದಂತೆ ಹೊರಡುತ್ತಿದ್ದೆವು . ಅವರ ನಡಿಗೆಯ ವೇಗಕ್ಕೆ ನಾವು ಒಂದೇ ಉಸಿರಿಗೆ ಓಡ ಬೇಕಾಗುತ್ತಿತ್ತು . ಸುಮಾರು ನಾಲ್ಕೈದು ಮೈಲುಗಳಷ್ಟು ದೂರ ಓಡಿದಮೇಲೆ ಅಪ್ಪನೊಂದಿಗೆ ಮನೆಗೆ ಮರಳುತ್ತಿದ್ದೆವು . ಆನಂತರ ಅವರೊಂದಿಗೆ ಓಡಿದವರಿಗೆಲ್ಲ ತಲಾ ಎರಡು ಆಣೆಯ ನಾಣ್ಯ ದೊರಕುತ್ತಿತ್ತು . ಜೊತೆಗೆ ನೆಂಟರ ಮಕ್ಕಳಿದ್ದರೆ ಅವರಿಗೂ ಈ ಕೊಡುಗೆ ಸಿಕ್ಕುತ್ತಿತ್ತು
                           ಅಪ್ಪನನ್ನು ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ . ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಸೂಕ್ಷ್ಮ ಗ್ರಾಹಿ ಗಳೆಂದು ಕಾಣುತ್ತದೆ ಅಪ್ಪ ಬೆಳಿಗ್ಗೆ ದನದಂತೆ ದುಡಿದು ರಾತ್ರಿ ಹತ್ತು ಹನ್ನೊಂದು ಗಂಟೆ ಯಲ್ಲಿ ಕುಳಿತು ಖಾಲಿಯಾದ ಷರಬತ್ತಿನ ಬಾಟಲು ಗಳನ್ನು ಎಣಿಸಿ ಲೆಕ್ಕಾಚಾರ ಮಾಡಿ ಅಂದಿನ ಲಾಭ ನಷ್ಟ ಗಳ ವರದಿಯನ್ನು ಅಮ್ಮನಿಗೆ ಒಪ್ಪಿಸುತ್ತಿದ್ದರು . ಜ್ಯೂಸು  ಕುಡಿದು ದುಡ್ಡು ಯಾಮಾರಿಸಿದವರ ಕಥೆಯೂ ಅಲ್ಲಿರುತ್ತಿತ್ತು . ಚಿಕ್ಕಹುಡುಗಿಗೆ ಏನು ಗೊತ್ತಾಗುತ್ತೆ ಎಂಬ ಧೋರಣೆ ಇರಬಹುದು .
                           ನಾನಂತೂ ನನ್ನಪಾಲಿಗೆ ಬಂಡ ದುಡ್ಡನ್ನೆಲ್ಲ ಒಂದು ಚಿಕ್ಕ ಡಬ್ಬಿಯಲ್ಲಿಟ್ಟು ಕಾಪಾಡುತ್ತಿದ್ದೆ . ಪ್ರಾಮಾಣಿಕತೆಯ ಪಾಠ ಅಪ್ಪ ಅಮ್ಮಂದಿರಿಂದ ಅವ್ಯಾಹತವಾಗಿ ನಡೆಯುತ್ತಲೇ ಇತ್ತು . ನಮ್ಮ ಕೈಯಲ್ಲೇ ಗಿಡಗಳ ಬೀಜಗಳನ್ನು ಹಾಕಿಸಿ , ನೀರು ಹಾಕಿಸಿ ಅವುಗಳು ಹೇಗೆ ಮೊಳೆತು ಗಿದವಾಗುವುದರ ಪ್ರಯೋಗ ದ ಅನುಭವವೂ ಆಗಿತ್ತು . ಒಂದು ಶುಭ ದಿವಸದಲ್ಲಿ ನನ್ನ ಅಣ್ಣ ಶಾಮಣ್ಣ ನನ್ನನ್ನು ಗುಟ್ಟಾಗಿ ಕರೆದ . ಯಾರಿಗೂ ಗೊತ್ತಾಗದಂತೆ ಹಿತ್ತಲಿಗೆ ಹೋದೆವು . ಅದು ಮಣ್ಣಿನ ನೆಲ .. ನೆಲದಲ್ಲಿ ಹತ್ತಾರು ಪುಟ್ಟ ಪುಟ್ಟ ಗುಂಡಿಗಳು . ಅಣ್ಣ ತನ್ನ ಯೋಜನೆಯೊಂದನ್ನು ವಿವರಿಸಿದ . ಮೊದಲೇ ಮನೆಯಲ್ಲೆಲ್ಲಾ ಬುದ್ದಿಜಿವಿಯೆಂದು ಹೆಸರು ಪಡೆದಿದ್ದ . ಅವನ  ಮಾತು ಕೇಳದಿದ್ದರೆ ಹೇಗೆ?
                             ನೋಡು  ಸೀಬೆ ಗಿಡದ  ಬಿತ್ತ ಹಾಕಿದರೆ ಸೀಬೆ ಗಿಡ ಬೆಳೆಯುತ್ತೆ . ಸಪೋಟಬಿತ್ತ ಹಾಕಿದರೆ ಸಪೋಟ ಬೆಳೆಯಬಹುದು .  ನನ್ನ ಹತ್ರ ಇರೋ ದುಡ್ಡನ್ನೆಲ್ಲ ಹಾಕಿ ದುಡ್ಡಿನಗಿಡ ಬೆಳೆಯುತ್ತಿದ್ದೇನೆ . ನೀನೂ ಬೇಕಾದರೆ ಇಲ್ಲಿಯೇ  ದುಡ್ಡನ್ನೆಲ್ಲಾ ನೆಟ್ಟರೆ ದುಡ್ಡಿನ ಬೆಳೆಯನ್ನೇ ಬೆಳೆಯಬಹುದು ಎಂದಾಗ ಮರುಮಾತಿಲ್ಲದೆ ಒಪ್ಪಿಕೊಂಡೆ . ದಿನಾ ಎರಡು ಹೊತ್ತೂ ನೀರು ತಪ್ಪದೇ ಹಾಕಬೇಕು ಎಂದು ತನ್ನ ನಿಯಮಗಳನ್ನೂ ತಿಳಿಸಿದ್ದಕ್ಕೂ ತಲೆಯಾಡಿಸಿದೆ ರಾತ್ರಿಯೆಲ್ಲಾ ಕನಸೋ ಕನಸು . ಗಿಡಗಳ ತುಂಬಾ ನಾಣ್ಯ ಗಳೋ ನಾಣ್ಯಗಳು . ಅಪ್ಪನ ಬಡತನ ನೀಗಿಸಿದ ಹಿಗ್ಗು
                              ಯಾಕಿನ್ನೂ ಒಂದೂ ನಾಣ್ಯ ಮೊಳಕೆ ಬರಲಿಲ್ಲಾ ಎಂದು ಹಳ್ಳಗಳನ್ನೆಲ್ಲಾ ಕೆದಕಿ ನೋಡಿದೆ ಅಪ್ಪನನ್ನು ಕರೆದು ತೋರಿಸಿದೆ . ಅಯ್ಯೋ ಮುಗ್ದ ಹುಡುಗೀ ಎಂದು ಮುದ್ದಿಸಿ ಸ್ನೇಹಿತ ರನ್ನೆಲ್ಲ ಕರೆದು ತೋರಿಸಿದರು ಅವರ ಪಾಲಿಗೆ ಪ್ರದರ್ಶನಕ್ಕಿಟ್ಟ ಬೊಂಬೆ ಯಂತಾದೆ . ಹೀಗಾದರೂ ಅಪ್ಪನಿಗೆ ಸಹಾಯ ಮಾಡಬೇಕೆಂಬ ನನ್ನ ಆಸೆ ಆಸೆ ಯಾಗಿಯೇ ಉಳಿಯಿತು
                              . 

03/09/2013

ವೇದೋಕ್ತ ಜೀವನ ಶಿಬಿರ ನನ್ನ ಅನಿಸಿಕೆ

ಒಂದುದಿನ ಮಧ್ಯಾನ್ಹದ ವೇಳೆಯೊಳು  ದೂರವಾಣಿಯು ಉಲಿಯಿತು
 ಮೂರು ದಿವಸದ ವೇದೋಕ್ತ ಶಿಬಿರಕೆ ಬರುವೆಯಾ  ಎಂದೆಂದಿತು
ಮೂಡಿಬಂದ  ಧ್ವನಿಯು ನನ್ನ ತಂಗಿಯದೆಂದು ತಿಳಿಯಿತು
ಹೆಚ್ಚು  ವಿಷಯ ತಿಳಿಯಲು ಮನ ತವಕದಿಂದ ಪರಿತಪಿಸಿತು

ಬಾವಿಯೊಳಗಿನ ಕಪ್ಪೆಯಂದದಿ ಕಳೆಯುತಿದ್ದೆನು ದಿನಗಳ
ಅದುಮುತ್ತಿದ್ದೆನು ಕಲಿಯುವಾಸೆಯ ಎದುರಿಸಲಾಗದೆ ಜನಗಳ
ಭಯವು ಹೋಯಿತು ,ಸಂಕಲ್ಪವಾಯಿತು ವೇದ ಸೆಳೆಯಿತು ಮನವನು
ಶಿಬಿರ ಗೀತೆಯು ಅರ್ಥಗರ್ಭಿತ ವಾಗಿ ಸೆಳೆಯಿತು ತನುವನು

ಸ್ವರ್ಗದಲ್ಲೇ ಇರುವೆವೇನೋ ಎಂಬಂತೆ ದಿನಗಳು ಕಳೆದವು
ಕಾಯುತಿದ್ದ ಸವಿ ಸಮಯವದೆಷ್ಟು ಬೇಗನೆ ಜಾರಿತು
ಎಂದು  ಮರುಗುವ ಹೃದಯವನ್ನು ನಾವೇ ಸಂತಯಿಸಿ ಕೊಂಡೆವು
ಮತ್ತೆ ಬರುವ ಆಸೆಯಿಂದ ದಿನವನೆಣಿಸುತಲಿರುವೆವು

ಪುಟಕೆಹಾಕಿದ ಚಿನ್ನದಂತೆ ನಮ್ಮ ಬಾಳು ಬೆಳಗಿದೆ
ವೇದ ಕಲಿಕೆಯು ಜೀವನಕೆ ಒಂದರ್ಥವನ್ನು ಕೊಟ್ಟಿದೆ
ವೇದ ಜ್ಞಾನದ ಗಂಗೆಯಲಿ ಮಿಂದು ಜೀವ ಧನ್ಯವೆನಿಸಿದೆ
ವೇದಭಾರತಿ ಸಂಸ್ಥೆಗೆ ನಾವು ಚಿರಋಣಿಗಳು  ಎನಿಸಿದೆ

ಉಪನಯನವಾದ ಮನುಜನನ್ನು ದ್ವಿಜ  ಎಂದು ಕರೆವರು
ಜ್ಞಾನದುಪದೇಶದಿಂದ ನಾವೂ ಮರು ಹುಟ್ಟನ್ನೇ ಪಡೆದೆವು
ಬೆಳಕಿನಿಂದ ಕತ್ತಲೆಡೆಗೆ ನಾವೆಂದೂ ಸಾಗಲೊಲ್ಲೆವು
ನಂದದಾ  ನಂದಾ ದೀಪದಂತೆ ಜೀವನದಿ ನಾವಿರುವೆವು
                                  

                                                         ಸರೋಜಾರಾವ್